ಜೋಯಾನೀಸಿಯ -
	ಯೂಪೋರ್ಬಿಯೇಸೀ ಕುಟುಂಬಕ್ಕೆ ಸೇರಿದ ಒಂದು ಅಲಂಕಾರವೃಕ್ಷ. ಜೋಯಾನೀಸಿಯ ಪ್ರಿನ್ಸೆಪ್ಸ್ ಇದೆರ ಪೂರ್ಣ ಹೆಸರು. ಬ್ರಜಿಲಿನ ಮೂಲವಾಸಿ ಇದು. ಉಷ್ಣವಲಯದ ಹಲವಾರು ದೇಶಗಳಲ್ಲಿ ಇದರ ವ್ಯಾಪ್ತಿ ಉಂಟು. ಭಾರತದ ಉದ್ಯಾನಗಳಲ್ಲಿ ಇದನ್ನು ಅಲಂಕಾರಕ್ಕಾಗಿ ಬೆಳೆಸುವರು. ಇದು ಮಧ್ಯಮಗಾತ್ರದ ಗಟ್ಟಿಕಾಂಡದ ಮರ. ಇದರ ರೆಂಬೆಗಳು ಹರಡಿಕೊಂಡು ಬೆಳೆಯುವುದರಿಂದ ಮರ ಕಿರೀಟದಂತೆ ಕಾಣುತ್ತದೆ. ಎಲೆಗಳು ಸಂಯುಕ್ತ ಮಾದರಿಯವು. ಒಂದೊಂದರಲ್ಲೂ 3-7 ಹಾಲೆಗಳೂ ಉದ್ದವಾದ ತೊಟ್ಟೂ ಇವೆ. ಹೂಗಳು ಸಂಕೀರ್ಣ ಮಾದರಿಯ ಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. 5 ಪುಷ್ಪಪತ್ರಗಳು, 5 ದಳಗಳು, 7-10 ಕೇಸರಗಳು ಮತ್ತು 2 ಕಾರ್ಪೆಲುಗಳಿಂದ ಕೂಡಿದ ಒಂದು ಅಂಡಾಶಯ ಉಂಟು. ಫಲ ಅಷ್ಟಿ ಮಾದರಿಯದು. ಬೀಜದಲ್ಲಿ ವಾಸನೆಯುಳ್ಳ ತರುಳು ಇದೆ. ಇದರಲ್ಲಿ ಒಂದು ಬಗೆಯ ಸ್ಥಿರ ತೈಲ ಉಂಟು. ತೈಲದಿಂದ ದನಕರುಗಳ ವಿರೇಚಕವೊಂದನ್ನು ತಯಾರಿಸುವುದಿದೆ. ಅಲ್ಲದೆ ಇದನ್ನು ಸಾಬೂನು ತಯಾರಿಕೆಯಲ್ಲೂ ಬಳಸುವುದುಂಟು.
(ಎಸ್.ಐ.ಎಚ್.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ